ಕೋಲೀನ್ ಎಸ್ಟರೇಸ್

ಅಸಿಟೈಲ್ ಕೋಲೀನಿನ ಜಲವಿಶ್ಲೇಷಣೆಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಎನ್‍ಜೈóಮ್. ಇದರಲ್ಲಿ ಮಿಥ್ಯ ಕೋಲೀನ್ ಎಸ್ಟರೇಸ್ ಮತ್ತು ನೈಜ ಕೋಲೀನ್ ಎಸ್ಟರೇಸ್ ಎಂಬ ಎರಡು ಬಗೆಗಳಿವೆ. ಮಿಥ್ಯಕೋಲೀನ್ ಎಸ್ಟರೇಸ್ ಅಸಿಟೈಲ್ ಕೋಲೀನ್ ಅಲ್ಲದೆ ಬ್ಯಟಿರಿಲ್, ಸಕ್ಸಿನಿಲ್, ಮತ್ತು ಬೆಂಜೈóಲ್ ಕೋಲೀನುಗಳನ್ನೂ ಟ್ರೈಬ್ಯುಟಿರಿಲ್ ಮತ್ತು ಅದರಂಥ ಇತರ ಕೆಲವು ಎಸ್ಟರ್‍ಗಳನ್ನೂ ಜಲವಿಶ್ಲೇಷಣೆಗೆ ಒಳಪಡಿಸುತ್ತದೆ. ನೈಜ ಕೋಲೀನ್ ಎಸ್ಟರೇಸ್ ಮಾತ್ರ ನಿರ್ದಿಷ್ಟವಾಗಿ ಅಸಿಟೈಲ್ ಕೋಲೀನಿನ ಜಲವಿಶ್ಲೇಷಣೆಯಲ್ಲಿ ವೇಗವರ್ಧಕವಾಗಿದ್ದು ಕೋಲೀನ್ ಮತ್ತು ಅಸಿಟೇಟುಗಳನ್ನು ಉತ್ಪತ್ತಿಮಾಡುತ್ತದೆ. ನರಗಳ ಚೋದನೆಗಳ ಚಾಲನೆಯಲ್ಲಿ ಇದರ ಪಾತ್ರ ಬಹು ಮುಖ್ಯವಾದುದು. ಸಂದೇಶವಾಹಕ ನರಗಳಲ್ಲಿ ಈ ಎನ್‍ಜೈóಮ್ ಮತ್ತು ಅಸಿಟೈಲ್ ಕೋಲೀನುಗಳು ಇವೆ. ಮಿದುಳು, ನರಕೋಶಗಳು ಮಾಂಸಖಂಡಗಳು ಕೆಂಪು ರಕ್ತಕಣಗಳು, ಮಾನವನ ಸೀರಂ ಮತ್ತು ಥೆಮಸ್‍ಗಳಲ್ಲೂ ಎನ್‍ಜೈóಮ್ ಇರುವುದೆಂದು ತಿಳಿದುಬಂದಿದೆ. ಒಂದು ಮೋಲ್ ಅಸಿಟೈಲ್ ಕೋಲೀನ್ ಎಸ್ಟರೇಸು 2 ಘಿ 109 ಮೋಲ್ ಅಸಿಟೈಲ್ ಕೋಲೀನನ್ನು ಒಂದು ಮಿನಿಟಿನಲ್ಲಿ ಜಲವಿಶ್ಲೇಷಣೆಗೊಳಪಡಿಸುತ್ತದೆ. ಟಾರ್ಪೀಡೋಮೀನು ಮತ್ತು ಎಲೆಕ್ಟ್ರೋಫೋರಸ್ ಎಲೆಕ್ಟ್ರಿಕಸ್ ಎಂಬ ಮೀನುಗಳ ವಿದ್ಯುದುತ್ಪಾದಕ ಅಂಗಗಳ ಫಲಕಗಳಲ್ಲಿ ಇದು ಕೇಂದ್ರೀಕೃತವಾಗಿರುತ್ತದೆ. ಎಲೆಕ್ಟ್ರೋಫೋರಸ್ ಎಲೆಕ್ಟ್ರಿಕಸ್ಸಿನಿಂದ ಇದನ್ನು ತೆಗೆದು ಸ್ಫಟೀಕರಿಸಿದ್ದಾರೆ. ಇದರ ಅಣುತೂಕ 25,000. ಇದರಲ್ಲಿ ಕಾರ್ಬೊಹೈಡ್ರೇಟ್ ಸಹ ಇರುತ್ತದೆ. ಈ ಅಣುವಿನಲ್ಲಿ ಹತ್ತಿರಹತ್ತಿರದವಾಗಿ ಎರಡು ಬಂಧನ ಸ್ಥಳಗಳಿವೆ (ಬೈಂಡಿಂಗ್ ಸೈಟ್ಸ್). ಇವುಗಳಲ್ಲಿ ಒಂದು ಅನ್ ಅಯಾನಿಕ್ ಆಗಿದ್ದು ಅಸಿಟೈಲ್‍ಕೋಲೀನಿನ ಓ+ ಕ್ಯಾಟ್‍ಅಯಾನನ್ನು ಬಂಧಿಸುತ್ತದೆ. ಮತ್ತೊಂದು ಎಸ್ಟರೇಟಿಕ್ ಸ್ಥಳವಾಗಿದ್ದು ಅಲ್ಲಿ ಸೆರೀನ್ ಅವಶೇಷ ಮತ್ತು ನ್ಯೂಕ್ಲಿಯೋಫೈಲಿಕ್ ಹಿಸ್ಟಿಡೀನ್ ಗುಂಪುಗಳಿರುತ್ತವೆ. ಈ ಎನ್‍ಜೈóಮಿನ ಪ್ರತಿಬಂಧಕಗಳಾದ ಫೈಸೊಸ್ಟಿಗ್ಮಿನ್ ಮತ್ತು ಪ್ರಾಸ್ಟಿಗ್ಮಿನ್ನುಗಳು ಆನ್‍ಅಯಾನಿಕ್ ಮತ್ತು ಎಸ್ಟರೇಟಿಕ್ ಸ್ಥಳಗಳೆರಡರ ಜೊತೆಗೂ ಸೇರಿಕೊಳ್ಳುತ್ತವೆ. ಈ ಎನ್‍ಜೈóಮಿನೊಡನೆ ಎಸ್ಟರೇಟಿಕ್ ಪ್ರದೇಶದಲ್ಲಿ ವಿವಿಧ ಆಲ್ಕೈಲ್ ಫಾಸ್ಫೇಟುಗಳೂ ಡೈಐಸೊಪ್ರೊಪೈಲ್ ಫಾಸ್ಪೊಫ್ಲೋರಿಡೇಟೂ ಸೇರಿ ಅದನ್ನು ನಿಷ್ಕ್ರಯಗೊಳಿಸುತ್ತವೆ. ಇವನ್ನು ಕೀಟನಾಶಕಗಳನ್ನಾಗಿಯೂ ನರವಾಯು (ನರ್ವ್‍ಗ್ಯಾಸ್) ಆಗಿಯೂ ಉಪಯೋಗಿಸಿದ್ದಾರೆ. ಸೀರಂನಲ್ಲಿರುವ ಎನ್‍ಜೈóಮಿನ ಕ್ರಿಯೆಯ ಮಾಪನ ರೋಗನಿದಾನದಲ್ಲಿ ಉಪಯೋಗವಾಗುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ